Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/81

From Wikisource
This page has been proofread.

ಪರಿಚಯ, ಇಂಡಿಯನ್ ಆಕ್ಷಿನ ಸಾರಾಂಶ (1899ನೇ ಇಸವಿ 2ನೇ ಅಕ್ಷಿನಿಂದ ಎತ್ತಿತೆಗೆದು ಸಂಕ್ಷೇಪಿಸಿದ್ದು,

1915- ಲೋಕವಾರ್ತೆಯಲ್ಲಿ ಧೂಮಪಾನದ ಬಗ್ಗೆ ಈಚೀಚೆ ಬೀಡಿ ಸೇದುವ ಚಟಾ ಬಹಳ ಹೆಚ್ಚಿ ಹೋಗಿದೆ. ಎಳೆಯ ಹುಡುಗರೂ ಬಾಯಿಯಲ್ಲಿ ಬೀಡಿ ಇಟ್ಟುಕೊಂಡು ವಯೋವೃದ್ಧರನ್ನೂ ಸರಕು ಮಾಡದೇ ಹೊಗೆ ಬಿಡುವುದು ಕಾಣಬಹುದು. ಊರಲ್ಲಿಯೇ ಸುತ್ತಿದ ಬೀಡಿಗಳಲ್ಲದೆ ಪರದೇಶಗಳಿಂದ ಬರುವ ಬೀಡಿಗಳನ್ನು ರುಚಿಯಿಂದ ಸೇದುವುದು ವಾಡಿಕೆ. ಈ ಕೆಟ್ಟ ಚಟಕ್ಕೆ ಕೊನೆಗಾಣಿಸಬೇಕೆಂದು ಮದ್ರಾಸ್ ಗವರ್ನಮೆಂಟಿನವರು ಡೈರೆಕ್ಟರ್ ಆಫ್ ಪಬ್ಲಿಕ್ ಇನ್ಸ್‌ಟ್ರಕ್ಷನ್ ದೊರೆಗೆ ಮನವಿ ಬರೆದಿದ್ದಾರೇನೆಂದರೆ- ಎಳೆಯ ಹುಡುಗರು ಪಾಠಶಾಲೆಯ ವಠಾರದಲ್ಲಿಯಾಗಲೀ, ಆಡುವ ಹೊಲದಲ್ಲಿಯಾಗಲೀ ಬೀಡಿ ಸೇದಲೇಬಾರದೆಂದು ಕಟ್ಟಾಜ್ಞೆ ಮಾಡಿಸಬೇಕು ಇಂಥಾ ಆಜ್ಞೆ ಪ್ರಕಟವಾದರೆ ವ್ಯರ್ಥವಾದ ವೆಚ್ಚವೂ ಉಳಿಯುವುದಲ್ಲದೆ ಎಳೆಯರ ದೇಹಾರೊಗ್ಯವೂ ದೃಢವಾಗುವದು. 1929- ಕಳೆದ ವರ್ಷ ಮದ್ರಾಸಿನ ಗವರ್ನರಾಗಿದ್ದ ಗೋಷನ್ ಪ್ರಭುಗಳು ನಮ್ಮ ಜಿಲ್ಲೆಯನ್ನು ಸಂದರ್ಶಿಸುವವರಾದರು. ಇವರ ಸ್ವಾಗತ ಬಗ್ಗೆ ತಳಿರುತೋರಣ ಕಮಾನುಗಳಿಂದ ಶೃಂಗರಿಸಲ್ಪಟ್ಟ ದಾರಿಯ ಇಕ್ಕೆಡೆಗಳಲ್ಲಿಯೂ ಜನಸ್ತೋಮವು ಕಿಕ್ಕಿರಿದು ನೆರೆದಿದ್ದು ಪ್ರಭುಗಳ ಸಂದರ್ಶನವನ್ನು ತುಂಬಾ ನೋಡಿ ಸಂತೋಷಭರಿತರಾದರು. ಮುನಿಸಿಪಾಲಿಟಿಯವರೂ, ಡಿಸ್ಟಿಕ್ಸ್ ಬೋರ್ಡಿನವರೂ ಸಮರ್ಪಿಸಿದ ಬಿನ್ನವತ್ತಳೆಗಳನ್ನು ಆದರದಿಂದ ಆಲಯಿಸಿ, ಆಸ್ಪತ್ರೆ, ಹೊಸ ಮುನಿಪಾಲ್ ಕಟ್ಟೋಣ, ಗವರ್ನ್‌ಮೆಂಟ್ ಕಾಲೇಜಿನ ಬಡಾವಣೆ, ಇತ್ಯಾದಿ ಮನವಿಗಳ ಸಂಬಂಧವಾಗಿ ಮಾಡಿಕೊಂಡ ಅರಿಕೆಗಳಿಗೆ ಸಮರ್ಪಕವಾದ ಉತ್ತರಗಳನ್ನು ದಯಪಾಲಿಸಿದರು. ಸಾರ್ವಜನಿಕ ಸ್ವಾಗತ ಕಾರ್ಯಗಳು ತೀರಿದ ನಂತರ ಫಾದರ್ ಮುಲ್ಲರರ ಆಸ್ಪತ್ರೆ, ಕಾಫಿ, ಹಂಚು, ಕಾರ್ಖಾನೆಗಳು, ಸಂತ ಜೋಸೆಫ್ ಕೈಗಾರಿಕೆ ನಿಲಯ, ಸರಕಾರಿ ಆಸ್ಪತ್ರೆ ಇತ್ಯಾದಿಗಳನ್ನು ಸಂದರ್ಶಿಸಿದರು. ಹೆಂಗಸರ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡದ ಶಂಕುಸ್ಥಾಪನೆ ಸಮಾರಂಭವೂ ನಡಯಿತು. ಪುರಾತನ ಪ್ರಸಿದ್ದ ಶಿಲ್ಪ ಚಮತ್ಕಾರದ ಕಟ್ಟೋಣಗಳಿರುವ ಮೂಡಬಿದ್ರೆ ಇತ್ಯಾದಿ ಜಾಗಗಳನ್ನು ಸಂದರ್ಶನ ಮಾಡಲಾಯಿತು. ನಿಗರ್ವ. ವಿನಯಭಾವಭರಿತರಾದ ಗವರ್ನರ್ ಪ್ರಭುಗಳಿಗೂ ಅವರ ಸಾನಿಯವರಿಗೂ ಸ್ವಾಮಿಯು ಆಯುರ್ಭಾಗ್ಯವನ್ನು ದಯಾಪಾಲಿಸುವಾತನಾಗಲಿ. ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು. 69