Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/20

From Wikisource
This page has been proofread.

ತಯಾರಾಗಬೇಕು ಎಂಬುದು ಸರಕಾರದ ನಿಯಮವಾಗಿತ್ತು. ಮುಂಬಯಿಯಲ್ಲಿ ಕಲ್ಲಚ್ಚು ಮುದ್ರಣದಲ್ಲಿ ಕೆಲವು ಕನ್ನಡ ಪುಸ್ತಕಗಳನ್ನು ಮುದ್ರಿಸಿ ಶಾಲಾ ಪಠ್ಯವಾಗಿ ಉಪಯೋಗ ಮಾಡಲಾಗುತ್ತಿತ್ತು. ಕಲ್ಲಚ್ಚು ಮುದ್ರಣದ ಶಿಲೆಗಾಗಿ ಕರ್ನೂಲಿನಿಂದ ಮೆದುವಾದ ಕಲ್ಲಿನ ಹಲಗೆಗಳನ್ನು ತರಿಸಲಾಗುತ್ತಿತ್ತು. ಈ ಮುದ್ರಣದಿಂದ ನೂರಾರು ಪ್ರತಿಗಳು ಏಕಕಾಲಕ್ಕೆ ಮುದ್ರಿಸಲು ಅಸಾಧ್ಯವಾಗಿತ್ತು. ಇಂಗ್ಲಿಷ್ ಭಾಷೆಯ ಅಚ್ಚುಮೊಳೆಗಳಂತೆ ಕನ್ನಡದ ಅಚ್ಚು ಮೊಳೆಗಳನ್ನು ಎಲ್ಲಿಂದಲೂ ಎರವಲು ಪಡೆಯಲು ಸಾದ್ಯವಿರಲಿಲ್ಲ. ಇದಕ್ಕಾಗಿಯೇ ಕಲ್ಲಚ್ಚು ಅಥವಾ ಶಿಲಾ ಮುದ್ರಣವು ಬಿಡಿಮೊಳೆಗಳ ಬದಲಾಗಿ ಬಂದವು. ಮುಂಬಯಿಯ ಗವರ್ನಮೆಂಟ್ ಸೆಂಟ್ರಲ್ ಪ್ರೆಸ್, ಮುಂಬಯಿಯ ಆನಂದರಾಯ ಕಲ್ಲಿನ ಮದ್ರಣ ಮೊದಲಾದ ಕಲ್ಲಚ್ಚು ಮುದ್ರಣ ಛಾಪಖಾನೆಗಳ ಹೆಸರುಗಳು ಕನ್ನಡವನ್ನು ಕಲ್ಲಚ್ಚು ಮುದ್ರಣದಲ್ಲಿ ಮುದ್ರಿಸಿದ ಮೊದಲು ಛಾಪಖಾನೆಗಳಾದರೆ ಮುದ್ರಣ ವ್ಯವಸ್ಥೆಯಲ್ಲಿ ಕ್ರಾಂತಿಯನ್ನೇ ಮಾಡಿದ ಬಾಸೆಲ್ ಮಿಶನ್ ಪ್ರೆಸ್ ಎರಡನೆಯದು. ಕಲ್ಲಚ್ಚು ಮುದ್ರಣಗಳನ್ನು ಮಾಡುತ್ತಿದ್ದ ಜಗನ್ಮೋಹನ ಮುದ್ರಣಶಾಲೆ ಮತ್ತು ಕೃಷ್ಣರಾಜ ಮುದ್ರಣ, ಮೈಸೂರು, ಜ್ಞಾನಬೋಧಕ ಛಾಪಖಾನೆ ಮತ್ತು ಸನ್ಮಾರ್ಗ ದರ್ಶನ ಭಾಪಖಾನೆ ಧಾರವಾಡ, ಹಿಂದೂ ಪ್ರೆಸ್, ಮಂಗಳೂರು ಮುಂತಾದ ಹಲವಾರು ಛಾಪಖಾನೆಗಳ ಹೆಸರುಗಳು ಸಿಗುತ್ತವೆ.Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/20/br

ಮಂಗಳೂರಿನಲ್ಲಿ ಮುದ್ರಣ : ತುಳುನಾಡಿನ ಮೊದಲ ಮುದ್ರಣಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾದ ಬಾಸೆಲ್ ಮಿಶನ್ ಪ್ರೆಸ್ ತುಳು ಜಿಲ್ಲೆಗೆ ವಿದೇಶಿಯರ ಕೊಡುಗೆಗಳಲ್ಲೊಂದು. 179 ವರ್ಷಗಳ ಹಿಂದೆ ಸ್ಥಾಪನೆಗೊಂಡ ಈ ಮುದ್ರಣಾಲಯವು ಈಗಲೂ ಹೊಸಅವಿಷ್ಕಾರ ದೊ೦ದಿಗೆ ಕಾರ್ಯವೆಸಗುತ್ತಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿರುತ್ತದೆ. 1834ರಿಂದಲೇ ಆರಂಭವಾದ ಕ್ರೈಸ್ತರ ಆರಾಧನೆ ಹಾಗೂ 1835ರಲ್ಲಿ ಪ್ರಾರಂಭವಾದ ಪ್ರಾಥಮಿಕ ಶಾಲೆ ಮುಂತಾದವುಗಳಿಗೆ ಮುದ್ರಿತ ಪಠ್ಯ ಪುಸ್ತಕಗಳ ಅಗತ್ಯವಿತ್ತು. ಕನ್ನಡದ ಧಾರ್ಮಿಕ ಹಾಗೂ ಪಠ್ಯ ಪುಸ್ತಕಗಳನ್ನು ಬೊಂಬಾಯಿ ಮತ್ತು ಮದ್ರಾಸ್‌ನಲ್ಲಿ ಕಲ್ಲಚ್ಚು ಮುದ್ರಣದಿಂದ ಮುದ್ರಿಸಿ ತರಲಾಗುತ್ತಿತ್ತು. ಮಲಯಾಳಂ ಪುಸ್ತಕಗಳನ್ನು ಕಲ್ಲಿಕೋಟೆಯಿಂದ ಮುದ್ರಿಸಿ ತರಿಸಲಾಗುತ್ತಿತ್ತು. 1840ರಲ್ಲಿ ಬಾಸೆಲ್ ಮಿಶನ್‌ಗೋಸ್ಕರ ಮಲಯಾಳಂ ಭಾಷೆಯಲ್ಲಿ ಬೈಬಲಿನ ಮೊದಲ ಪುಸ್ತಕವಾದ ಉತ್ಪತಿ ಪುಸ್ತಕವು ಕಲ್ಲಿಕೋಟೆಯಲ್ಲಿಯೂ, ಬಾಸೆಲ್ ಮಿಶನ್‌ನ ಮೊದಲ ಸಂಗೀತ ಪುಸ್ತಕವಾದ ಗೀತಗಳು(1842) ಮುಂಬಯಿಯಲ್ಲಿಯೂ ಮುದ್ರಣಗೊಂಡಿದೆ. ಬಳ್ಳಾರಿ, ಮದ್ರಾಸ್,Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/20/br 08

ತುಳುನಾಡಿನಲ್ಲಿ ಬಾಸೆಲ್ ಮಿಷನ್ ಮತ್ತಿತರ ಲೇಖನಗಳು...