Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/121

From Wikisource
This page has not been proofread.

3 ಇನ್ನೊಂದು ಸಮೃದ್ಧ ಸಂಗ್ರಹ ಇತಿಹಾಸ ವಿಷಯದ್ದು. ಅದರಲ್ಲಿಯೂ ಕರ್ನಾಟಕ ಇತಿಹಾಸದ ವಿವಿಧ ಅಂಶಗಳ ಅಭ್ಯಾಸಿಗಳಿಗೆ ಇಲ್ಲಿ ವಿಪುಲ ಸಾಮಗ್ರಿ ಲಭ್ಯವಿದೆ. ವಿಲ್ಸ್‌ನ ಮೈಸೂರು ಇತಿಹಾಸ, ಪ್ಲೇಟರ ಸುಪ್ರಸಿದ್ದ Dynasties ಪುಸ್ತಕ, ಆದಿಲಶಾಹಿಗಳ ಬಿಜಾಪುರ, ಈಸ್ಟ್ ಇಂಡಿಯಾ ಕಂಪೆನಿಯವರ ಕಾರವಾರ 'ಫ್ಯಾಕ್ಟರಿ', ಈ ಕುರಿತ ಗ್ರಂಥಗಳು ಅಪೂರ್ವದ ಸದರಿನಲ್ಲಿ ಬರುವಂತಹವು. ಜೈನಧರ್ಮ ವಿಚಾರದಲ್ಲಿ ಮೂಲಭೂತ ಸಾಮಗ್ರಿ ಇದೆ. ವಿಶೇಷತ: ಜೈನರಿಗೆ ವೇದಸಮಾನವಾದ ಜಿನಸೇನಕೃತ 'ಮಹಾಪುರಾಣ' (ಕನ್ನಡದಲ್ಲಿಯ ಅತಿ ದೊಡ್ಡ ಗಾತ್ರದ ಪುಸ್ತಕ), ಪೂಜಾರರ ಜೈನಧರ್ಮ ಪರಿಭಾಷೆ, ಮಿರ್ಜಿ ಅಣ್ಣಾರಾಯರ ಜೈನೀಯ ಸಮಗ್ರ ವಿವೇಚನೆ ಹಾಗೇನೇ ಗೊಮ್ಮಟೇಶ್ವರನ ಸಾದ್ಯಂತ ಮೊದಲಾದುವುಗಳೂ ಇವೆ. ಮಾಹಿತಿ ಫೈಲುಗಳು: ಈ ಬೃಹತ್ ಗ್ರಂಥ ಸಂಗ್ರಹಕ್ಕೆ ಸರಿದೂಗುವ ಸಾಮಗ್ರಿ ಎಂದರೆ ಅಪೂರ್ವ ಮಾಹಿತಿ ಫೈಲುಗಳದ್ದು; ಇವುಗಳು ಹಳೆಯ ಕಾಗದ ಪತ್ರಗಳು, ಪ್ರೆಸ್ ಕಟಿಂಗ್ಸ್ ಇವನ್ನು ಒಳಗೊಂಡವುಗಳು. ಕರ್ನಾಟಕದ ಬೇರೆ ಬೇರೆ ಪ್ರದೇಶಗಳ ಬಗ್ಗೆ ಐತಿಹಾಸಿಕ ಮಾಹಿತಿ, ನಾಡಿನ ಶಿಲ್ಪಕಲೆ, ಶಾಸನ ಸಮೀಕ್ಷೆ, ಕನ್ನಡ ಪತ್ರಿಕಾ ಪ್ರಪಂಚ, ಸಂಶೋಧನ ಮಾರ್ಗ, ಕನ್ನಡ-ಮರಾಠಿ ರಂಗಭೂಮಿ, ಸ್ತ್ರೀವಾದಿತ್ವ ಕಂಪ್ಯೂಟರ್ ವಿಧಾನ ಇಂಥ ಹತ್ತೈವತ್ತು ವಿಷಯಗಳು ಫೈಲುಗಳಲ್ಲಿವೆ. ಜ್ಞಾನಪೀಠ ಪ್ರಶಸ್ತಿಗರನ್ನೊಳಗೊಂಡು ಕನ್ನಡದ ಹಿರಿಯ ಲೇಖಕರನೇಕರ ಪರಿಚಯದ ಫೈಲುಗಳು. ಇಲ್ಲಿಯ ಮಾಹಿತಿ ಸಂಚಯನದ ದೊಡ್ಡ ಆಕರ್ಷಣೆ ಎನ್ನಬಹುದು. ಈ ರೀತಿಯ ಮಾಹಿತಿ ಶೇಖರಣೆ ಹಾವನೂರರ ವ್ಯಾಸಂಗದ ವೈಶಿಷ್ಟ್ಯವೇ ಆಗಿದೆ. - ಕನ್ನಡಕ್ಕೆ ಮಿಶನರಿಗಳ ಕೊಡುಗೆ, ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ, ಮೊದಲ ಸಚಿತ್ರ ಪತ್ರಿಕೆ ವಿಚಿತ್ರ ವರ್ತಮಾನ ಸಂಗ್ರಹ, ಹೊಸಗನ್ನಡದ ಹರಿಕಾರ ಫರ್ಡಿನಂಡ್ ಕಿಟ್ಟೆಲ್, ದಾಸ ಸಾಹಿತ್ಯವನ್ನು ಮೊದಲು ಬೆಳಕಿಗೆ ತಂದ ಮೋಗ್ಲಿಂಗ್, ಹೊಸಗನ್ನಡದ ಕಾವ್ಯ ಆರಂಭ 1890 ಅಲ್ಲ 1862, ತುಳುವಿನ ಮೊದಲ ಪಠ್ಯ ಇವೆಲ್ಲವೂ ಅವರು ಬೆಳಕಿಗೆ ತಂದ ಸಂಶೋಧನೆಗಳು, ಬಾಸೆಲ್ ಮಿಶನ್, ಲಂಡನ್ ಮಿಶನ್, ವೆಸ್ಲಿಯನ್ ಮಿಶನ್, ಇಂತಹ ಯಾವುದೇ ಮಿಶನ್‌ಗಳ ಮಿಶನರಿಗಳ ಸಾಹಿತ್ಯ ಮಾಹಿತಿ ಬೇಕೆಂದು ಡಾ. ಹಾವನೂರರಲ್ಲಿ ವಿಚಾರಿಸಿದರೆ (ಅದು ಮುಖತ ಭೇಟಿಯಾಗಲಿ, ಫೋನಿನಲ್ಲಿಯಾಗಲಿ) ಅವರಲ್ಲಿ ತಕ್ಷಣ ಉತ್ತರ ಸಿಗುತ್ತಿತ್ತು. ಇದರಿಂದ ಇವರು ಮಿಶನರಿ ಸಾಹಿತ್ಯ ಮಾಹಿತಿ ಕೋಶವೇ ಆಗಿದ್ದರು. ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು. 109