Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/107

From Wikisource
This page has not been proofread.

ಸ್ಥಾಪನೆಯ ಬಗ್ಗೆ ಈ ರೀತಿ ವರದಿ ಮಾಡಿದ್ದಾರೆ. “ನಮ್ಮ ಮನೋದೃಷ್ಟಿಯು ಈ 1914-1918ರಲ್ಲಿ ನಡೆದಿದ್ದ ಮಹಾಯುದ್ಧ ಕಡೆಗೆ ಸೆಳೆಯಲ್ಪಡುತ್ತದೆ. ಆ ಯುದ್ಧದ ದೆಸೆಯಿಂದ ಬಾಸೆಲ್ ಮಿಶನ್ ಜರ್ಮನ್ ಮಿಶನರಿಗಳು ತಮ್ಮ ಅಧೀನದಲ್ಲಿದ್ದ ಇಲ್ಲಿಯ ಕಾರ್ಯಕ್ಷೇತ್ರಗಳನ್ನು ಬಿಟ್ಟು ಸ್ವದೇಶಕ್ಕೆ ತೆರಳುವ ನಿರ್ಭಂಧಕ್ಕೊಳಗಾದ್ದರಿಂದ, ಅವರಿಂದ ಸ್ಥಾಪಿತವಾದ ಸಭೆಗಳು ಆ ಕಾಲದಲ್ಲಿ ಅವರಿಂದ ಹೊಂದುತಿದ್ದ ಸಹಾಯವನ್ನೂ ನಾಯಕತ್ವವನ್ನೂ ಕಳಕೊಂಡವು. ಆದ್ಯ ಮಿಶನರಿಗಳು ನಮಗೆ ಸ್ವಾಮಿ ಕ್ರಿಸ್ತನ ಸುವಾರ್ತೆಯನ್ನು ತಂದುಕೊಟ್ಟದ್ದು ಮಾತ್ರವಲ್ಲದೆ, ಸಾಮಾಜಿಕ ಮತ್ತು ಆರ್ಥಿಕ ವಿಷಯಗಳಲ್ಲಿ ಸಹ ನಮ್ಮ ಹಿತಚಿಂತಕರಾಗಿದ್ದು ನಮಗೆ ಬೆನ್ನಾಸರೆಯಾಗಿರುತ್ತಿದ್ದರು. ಇದರ ಫಲಿತಾಂಶ ಎಂಬಂತೆ ನಮ್ಮ ಜನರು ಆಪತ್ತು ವಿಪತ್ತಿನ ಕಾಲಗಳಲ್ಲಿ ಹಾಗೂ ಇನ್ನಿತರ ಯಾವದೊಂದು ಸಹಾಯವು ಬೇಕಿದ್ದರೂ ಕೂಡಾ ಮಿಶನರಿಗಳ ಕೈ ಕಾಯುವ ಚಟಕ್ಕೊಳಬೀಳುವವರಾದರು. ಆದರೆ ಯುದ್ಧದಿಂದ ಪರಿಣಮಿಸಿದ ನವೀನ ಪರಿಸ್ಥಿತಿಯಲ್ಲಿ ಇವೆಲ್ಲವೂ ಮಾರ್ಪಾಟವಾಗಿ, ನಮ್ಮ ಜನರು ಸಹಾಯದ ಹೊಸ ದಾರಿಗಳನ್ನು ಕಂಡುಹಿಡಿಯುವುದೂ ಸ್ವಾವಲಂಬನೆಯನ್ನು ಕಲಿಯುವುದೂ ಅವಶ್ಯವೆನಿಸಿತು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮಲ್ಲಿದ್ದ ಸಮಾಜ ಹಿತಚಿಂತಕರಾದ ವಿಚಾರಶೀಲರಲ್ಲನೇಕರು, ಆ ಕಾಲದಲ್ಲಿ ನಮ್ಮ ಸಂಸ್ಥಾನದಲ್ಲಿ ಸರಕಾರದವರಿಂದ ಸ್ಥಾಪಿಸಲ್ಪಟ್ಟಿದ್ದ ಸಹಕಾರ ಚಳವಳವು ಕೆಲಮಟ್ಟಿಗಾದರೂ ನಮ್ಮ ಜನರಿಗೆ ಸಹಾಯ ಮಾಡಲಿಕ್ಕೆ ತಕ್ಕುದಾದ ಒಂದು ಸಾಧನವಾಗುವದೆಂದು ಮನಗಂಡರು. ಈ ಸಂದರ್ಭದಲ್ಲಿ ನಮ್ಮ ಪ್ರೊಟೆಸ್ಟಂಟ್ ಕ್ರೈಸ್ತರ ಪರಿಸ್ಥಿತಿಯನ್ನು ಕುರಿತು ಒಂದೆರಡು ಮಾತುಗಳನ್ನು ಹೇಳಬೇಕಾಗಿದೆ. ಮಂಗಳೂರಿನಲ್ಲಿರುವ ನಮ್ಮ ಸಭೆಯವರಲ್ಲಿ ಅನೇಕರು ಹಂಚಿನ, ಕಬ್ಬಿಣ, ನೇಯುವ ಮತ್ತು ಇನ್ನಿತರ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ದಿನಕೂಲಿಯವರು. ಇನ್ನು ಅನೇಕರು ಉಪದೇಶಕ, ಉಪಾಧ್ಯಾಯ ಮತ್ತು ಕಾರಕೂನ ಮೊದಲಾದ ವೃತ್ತಿನಲ್ಲಿ ಇರುವವರು. ಸಾಹುಕಾರರೂ ಜಮೀನುದಾರರೂ ಶ್ರೀಮಂತರೂ ನಮ್ಮಲ್ಲಿ ಕಡಿಮೆ. ನಿಜವಸ್ತು ಸ್ಥಿತಿಯು ಹೀಗಿರುವುದರಿಂದ ನಮ್ಮಲ್ಲಿದ್ದ ಸಾಹಸಿಗಳು ಯಾವದೊಂದು ಸ್ವತಂತ್ರ ವೃತ್ತಿಯನ್ನು ಹೊಸದಾಗಿ ಪ್ರಾರಂಭಿಸಬೇಕೆಂದಿದ್ದರೆ, ಇಲ್ಲವೆ ಉದ್ದಿಮೆ ಸ್ಥಾಪಿಸುವುದು, ಮನೆಕಟ್ಟಲು ಬಯಸುವುದಾದರೆ ಅವರಿಗೆ ದ್ರವ್ಯಾನುಕೂಲತೆಗಳು ಒದಗಿಸಿ ಕೊಡಲಿಕ್ಕೆ ನೆರೆವಾಗಲು ಮುಂದೆ ಬರುವಂತವರು ಸಿಗುವುದು ಕೇವಲ ದುಸ್ತರವು. ಆದರೆ ಧನೈಶ್ಚರ್ಯಗಳು ಇಲ್ಲದಿದ್ದಾಗ್ಯೂ ನಮ್ಮ ಸಭಿಕರನೇಕರಲ್ಲಿ ಕಾರ್ಯದಕ್ಷತೆ, ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 95