Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/9

From Wikisource
This page has been proofread.

Template:Centere

“ಎಷ್ಟು ಲೇಖನಗಳನ್ನು ಬರಿ ಅದು ಯಾವುದೇ ಹೊಸ ವಿಚಾರವಾಗಿರಲಿ ಅಥವಾ ದಾಖಲೀಕರಣವಿರಲಿ ನಿಯತಕಾಲಿಕೆಗಳಲ್ಲಿ ಸ್ಮರಣ ಸಂಚಿಕೆಗಳಲ್ಲಿ ಬರೆದು ಸುಮ್ಮನಿರಬೇಡ ಯಾಕಂದರೆ ಅದು ಶಾಶ್ವತವಾಗಿ ಉಳಿಯುವುದಿಲ್ಲ. ಅದನ್ನು ಪುಸ್ತಕ ರೂಪದಲ್ಲಿ ಹೊರ ತರಬೇಕು, ಯಾವುದೇ ಪುಸ್ತಕಕ್ಕೆ ಓದುಗರು ಇಲ್ಲವೆಂದಿಲ್ಲ ಪ್ರತೀ ಪುಸ್ತಕಕ್ಕೆ ಒಬ್ಬ ಓದುಗ ಇರುತ್ತಾನೆ. ಅದಕ್ಕೆ ದೀರ್ಘ ಬಾಳಿಕೆ ಇರುತ್ತದೆ. ಆದ್ದರಿಂದ ಲೇಖಕ ಸಂಶೋಧನೆಯ ಬರಹಗಳ ಪುಸ್ತಕಗಳು ಯಾವುದಾದರೂ ಒಂದು ಗ್ರಂಥಾಲಯದಲ್ಲಿರುತ್ತದೆ” ಎನ್ನುತ್ತಿದ್ದ ಡಾ. ಶ್ರೀನಿವಾಸ ಹಾವನೂರರನ್ನು ಸ್ಮರಿಸಿಕೊಂಡು ನನ್ನ ಲೇಖಗಳ ಸಂಗ್ರಹವನ್ನು ಹೊರತರುತ್ತಿದ್ದೇನೆ. ಬೇರೆ ಬೇರೆ ವಸ್ತು ವಿಷಯಗಳನ್ನೊಳಗೊಂಡ ಸಾವಿರಾರು ಲೇಖನಗಳನ್ನು ನಾವು ಓದಿ ಮನನ ಮಾಡಿಕೊಳ್ಳುತ್ತೇವೆ. ಇವುಗಳಲ್ಲಿ ಸಾಹಸಪಟ್ಟು ಬರೆದ ಅಮೂಲ್ಯ ಲೇಖನಗಳೂ, ಈ ತನಕ ಬೆಳಕಿಗೆ ಬಾರದ ವಿಷಯಗಳೂ ಸೇರಿದ್ದು ಸಂಗ್ರಹಕ್ಕೆ ಯೋಗ್ಯವಾಗಿರುತ್ತದೆ. ಆದರೆ ನಿಯತಕಾಲಿಕ ಹಾಗೂ ಸ್ಮರಣ ಸಂಚಿಕೆಗಳಲ್ಲಿ ಬರುವ ಲೇಖನಗಳನ್ನು ಸಂಗ್ರಹಿಸಿ ಬಳಸಿಕೊಳ್ಳುವ ಹವ್ಯಾಸಗಳು ನಮ್ಮಲ್ಲಿಲ್ಲ. ಇತ್ತೀಚಿಗಿನ ವರ್ಷಗಳಲ್ಲಿ ಲೇಖಕರುಗಳು ಬರೆದ ಲೇಖನಗಳ ಸಂಗ್ರಹದ ಕೃತಿಗಳು ಸಮಗ್ರ ಸಾಹಿತ್ಯ, ಅಭಿನಂದನಾ ಗ್ರಂಥ, ಸಂಸ್ಮರಣಾ ಗ್ರಂಥ ಇಂತಹ ಶಿರೋನಾಮೆಗಳ ಮೂಲಕ ಪ್ರಕಟಗೊಳ್ಳುತ್ತಿದ್ದು ಸಂಶೋಧಕರು ತಾಳ್ಮೆಯಿಂದ ಬರೆದ ಬರಹಗಳಿಗೆ ಗ್ರಂಥ ಸಂಗ್ರಹಗಳ ಕಪಾಟಿನಲ್ಲಿ ಸ್ಥಳ ಸಿಕ್ಕಂತಾಗಿ ಓದುಗನಿಗೆ ಜ್ಞಾನ ಒದಗಿಸುವ ಕಾರ್ಯವನ್ನು ಮಾಡುತ್ತಿವೆ. ಪುಸ್ತಕಗಳ ನಡುವೆ ಕಳೆದ 38 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಾನು ದಾಖಲೀಕರಣದ ಬಗ್ಗೆ ಹೆಚ್ಚು ಗಮನ ಕೊಡುವುದರಿಂದ ನನ್ನ ಬರಹಗಳು ದಾಖಲೀಕರಣದಂತೆ ಇರುತ್ತದೆ. ವಿವಿಧ ವಸ್ತು ವಿಷಯಗಳನ್ನೊಳಗೊಂಡ ಲೇಖನಗಳು ಪುಸ್ತಕ ರೂಪದಲ್ಲಿದ್ದು ಓದುಗರಿಗೆ ಉಪಯೋಗವಾಗಬೇಕು ಎಂಬ ದೃಷ್ಟಿಯಿಂದ ಹಲವಾರು ವರ್ಷಗಳಿಂದ ನಿಯತಕಾಲಿಕೆ, ಸ್ಮರಣ ಸಂಚಿಕೆ, ಉಪನ್ಯಾಸ, ಆಕಾಶವಾಣಿಯಲ್ಲಿ ಪ್ರಕಟಗೊಂಡ ನನ್ನ ಬರಹಗಳನ್ನು 'ತುಳುನಾಡಿನಲ್ಲಿ ಬಾಸೆಲ್‌ಮಿಶನ್‌ ಮತ್ತಿತರ ಲೇಖನಗಳು, ಎಂಬ ಹೆಸರಿನೊಂದಿಗೆ ಈ ಕೃತಿಯನ್ನು ಓದುಗರಾದ ತಮ್ಮ ಮುಂದಿಡಲು ಬಯಸುತ್ತೇನೆ. xi