Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/224

From Wikisource
This page has not been proofread.

ಶ್ರೀಯುತ ಬೆನೆಟ್ ಜಿ. ಅಮನ್ನರವರು ಕಳೆದ 38 ವರ್ಷಗಳಿಂದ ಮಂಗಳೂರಿನ ಕರ್ನಾಟಕ ತಿಯೊಲಾಜಿಲ್ ಕಾಲೇಜಿನ ಗ್ರಂಥಾಲಯ ಮತ್ತು ಪತ್ರಾಗಾರದಲ್ಲಿ ಸೇವೆ ಸಲ್ಲಿಸುತ್ತಿರುವವರು. ನೂರಾರು ಸಂಶೋಧನೆಗೆ ನೆರವಾಗುವುದರೊಂದಿಗೆ ನಿರಂತರವಾಗಿ ಸಂಶೋಧನಾತ್ಮಕ ಬರವಣಿಕೆಗಳ ಮೂಲಕ ಗುರುತಿಸಿಕೊಂಡಿರುವವರು. ಮಿಶನರಿಗಳ ಬರವಣಿಗೆಗಳ ಮೂಲಕ ಸಂಬಂಧಪಟ್ಟಂತೆ ಅವರೊಂದು ಮಾಹಿತಿ ಕೋಶ. ಅವರ ಲೇಖನಗಳು ಇದೀಗ “ತುಳುನಾಡಿನಲ್ಲಿ ಬಾಸೆಲ್ ಮಿಶನ್-ಮತ್ತಿತರ ಲೇಖನಗಳು” ಎಂಬ ಹೆಸರಿನ ಕೃತಿಯಾಗಿ ಲೋಕಾರ್ಪಣೆಯಾಗುತ್ತಿದೆ. ನಿರಂತರ ಸಂಶೋಧನೆಯೊಂದಿಗೆ 'ಕುರಲ್ ಇಷ್ಟೆರ್ ಕುಡ್ಡ', 'ತುಳು ಪರಿಷತ್' 'ತುಳು ಬೈಬಲ್ ತರ್ಜುಮೆ ಸಮಿತಿ', ಸದಸ್ಯರಾಗಿ, ತುಳು ವಿಕಿಪಿಡಿಯಾ' ಸಂಪಾದಕರಾಗಿ, “ಬಲ್ಮಕೊ'ದ ನಿರ್ದೇಶಕರಾಗಿಯೂ ಇವರು ಸೇವೆ ಸಲ್ಲಿಸುತ್ತಿದ್ದಾರೆ. 2015-2017 ಸಾಲಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದು ಅಕಾಡೆಮಿಯ ಗ್ರಂಥಾಲಯ ಮತ್ತು ಪತ್ರಾಗಾರವನ್ನು ವ್ಯವಸ್ಥಿತವಾಗಿ ರೂಪಿಸಿದ್ದಾರೆ. 'ಮದಿಪು' ಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ. 'ಚಿಗುರಿದ ಬದುಕು' (ಕಿರು ಕಾದಂಬರಿ) (1996), 'ಬಿಲ್ಲವರು ಮತ್ತು ಬಾಸೆಲ್ ಮಿಶನ್'(2005), 'ಗಾನ ಗೊಂಚಲು' (ಸಂ.2006), 'ಜಾನ್ ಜೇಮ್ಸ್ ಬ್ರಿಗೆಲ್'(2012, ಕನ್ನಡ ವಿ.ವಿ., ಹಂಪಿ) ಕೃತಿಗಳನ್ನು ಬರೆದು ಪ್ರಕಟಿಸಿರುವುದಲ್ಲದೆ, 'ಬಾಸೆಲ್ ಮಿಶನರಿಗಳ ತುಳು ಟಿಪ್ಪಣಿಗಳು (2015) ಮತ್ತು 'ತುಳು ವಿಕ್ರಮಾರ್ಕ ಕತೆ' (2014) ಕೃತಿಗಳನ್ನು ಡಾ. ದುರ್ಗಾಪ್ರವೀಣ್‌ರರೊಂದಿಗೆ ಸಂಪಾದಿಸಿರುತ್ತಾರೆ. ಮಿಶನ್ -200 ಮತ್ತು 2009ರಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ಪುಸ್ತಕ ಪ್ರಕಟಣೆಗಳ ಸಂಪಾದಕ ಮಂಡಳಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಬಾಸೆಲ್ ಪ್ರಸ್ತುತ ಕೃತಿಯ ಶಿರೋನಾಮೆಯು ಅತ್ಯಂತ ಸೂಕ್ತವಾಗಿದ್ದು ಇಲ್ಲಿನ ಇಪ್ಪತ್ತೇಳು ಲೇಖನಗಳಲ್ಲಿ ಇಪ್ಪತ್ತು ಲೇಖನಗಳು ಬಾಸೆಲ್ ಮಿಶನ್‌ನ ವಿವಿಧ ಆಯಾಮಗಳ ಕೊಡುಗೆಗೆ ಸಂಬಂಧಪಟ್ಟವುಗಳಾಗಿವೆ. ಈ ಲೇಖನಗಳಲ್ಲಿ ಅವರು ಬಾಸೆಲ್ ಮಿಶನ್ ಸಂಸ್ಥೆಯು ಮುದ್ರಣ, ಸಂಸ್ಕೃತಿ, ಶಿಕ್ಷಣ, ಮಾಧ್ಯಮ, ಕನ್ನಡ ತುಳು ಸಾಹಿತ್ಯ, ಕೃಷಿ, ಮುಂತಾದ ಕ್ಷೇತ್ರದಲ್ಲಿ ನೀಡಿದ ಕೊಡುಗೆಯನ್ನು ವಿವರವಾಗಿ ಚರ್ಚಿಸಿದ್ದಾರೆ. ತುಳುನಾಡಿನಲ್ಲಿ ಬಿಲ್ಲವರು ಕ್ರೈಸ್ತರಾಗಲು ಕಾರಣವೇನು, ಮಹಿಳೆಯರ, ಶೈಕ್ಷಣಿಕವಾಗಿ ಹಿಂದುಳಿದವರ ಅಭಿವೃದ್ಧಿ, ಸ್ವದೇಶಾಭಿಮಾನ, ಸ್ವಾವಲಂಬನೆ, ವಿದೇಶಿಯರೊಂದಿಗೆ ದೇಶಿಯರು, ಸ್ವಾತಂತ್ರ್ಯ ಚಳುವಳಿ ಮುಂತಾದ ವಿಚಾರಗಳನ್ನು ಅನೇಕ ಅನನ್ಯ ಅಂಶಗಳೊಂದಿಗೆ ಅವರು ದಾಖಲಿಸಿದ್ದಾರೆ. ಇದರೊಂದಿಗೆ ಸಾಂದರ್ಭಿಕವಾಗಿ ಕ್ರಿಸ್ಮಸ್ ಹಬ್ಬದ ಆಚರಣೆ, ಕ್ರೈಸ್ತರ ಪಾರಂಪರಿಕ ಜ್ಞಾನ, ಆಧುನಿಕತೆಯಿಂದ ನಶಿಸುತ್ತಿರುವ ಕಸುಬುಗಳು, ಚರಿತ್ರೆಯಲ್ಲಿ ಸ್ಮರಣ ಸಂಚಿಕೆಗಳ ಪಾತ್ರ ಓದುವಿಕೆ ಮತ್ತು ಗ್ರಂಥ ಸಂರಕ್ಷಣೆಯ ವಿಧಾನ ಮೊದಲಾದ ವೈಶಿಷ್ಟ್ಯಪೂರ್ಣ ಲೇಖನಗಳು ಇಲ್ಲಿವೆ. ತುಳುನಾಡಿನ ಹಲವು ಮೊದಲುಗಳ ಬಗ್ಗೆ ಬೆಳಕು ಚೆಲ್ಲುವ ಈ ಕೃತಿ ವಿದೇಶಿಯರ ಕೊಡುಗೆಗಳ ಬಗೆಗಿನ ಹತ್ತುಹಲವು ಅಕರಗಳನ್ನು ತೆರೆದಿಡುತ್ತದೆ. ISBN 978-81-947424-4-9 ಡಾ. ಎಂ. ಎಸ್. ದುರ್ಗಾಪ್ರವೀಣ್‌ ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂ, ಆಂಧ್ರಪ್ರದೇಶ ಅಂಕನಹಳ್ಳಿ ಪ್ರಕಾಶನ ಅಂಕನಹಳ್ಳಿ, ಬನ್ನಿಕುಪ್ಪೆ ಅಂಚೆ, ಕೈಲಾಂಚ ಹೋಬಳಿ ರಾಮನಗರ ತಾ/ಜಿಲ್ಲೆ, ಮೊ : 9632497558